ಪ್ರಾಣಿವಿತರಣವಿಜ್ಞಾನ

ಭೂಮಿಯಲ್ಲಿ ಪ್ರಾಣಿಗಳ ವಿತರಣೆ, ಪರಿಸರದ ಮೇಲೆ ಅವುಗಳ ಪ್ರಭಾವ ಮತ್ತು ಅವುಗಳ ಮೇಲೆ ಪರಿಸರದ ಪ್ರಭಾವ-ಇವುಗಳ ವೈಜ್ಞಾನಿಕ ಅಧ್ಯಯನ (ಝೂಜಾಗ್ರಫಿ). ಪ್ರಾಣಿಗಳ ನೈಸರ್ಗಿಕ ವಿತರಣೆಯನ್ನು ಪರಿಶೀಲಿಸಿದಾಗ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. ಒಂದು, ಎಲ್ಲ ಪ್ರದೇಶಗಳಲ್ಲಿಯೂ ನೆಲೆಗೊಂಡಿರುವ ಪ್ರಾಣಿಜಾತಿ ಅತಿ ವಿರಳ, ಇಲ್ಲವೆಂದರೂ ಸಲ್ಲುತ್ತದೆ; ಎರಡು, ಹೆಚ್ಚಿನ ಪ್ರಾಣಿಜಾತಿಗಳು ತೀರ ಸೀಮಿತ ಪ್ರದೇಶಗಳಲ್ಲಿ ನೆಲೆಗೊಂಡಿವೆ.

	ಪ್ರಾಣಿವಿತರಣೆಯನ್ನು ನಿಯಂತ್ರಿಸುವ ಕಾರಕಗಳಿವು: ಪ್ರಾಣಿ ಸಂಖ್ಯಾ ಸ್ಫೋಟ, ತೀವ್ರಸ್ಫರ್ಧೆ, ಶತ್ರುಭಯ, ರೋಗಗಳು, ಆಹಾರ ಕೊರತೆ ಮತ್ತು ಪ್ರತಿಕೂಲವೆನಿಸುವ ಶ್ರಾಯಿಕ ಹವೆ. ಇವೇ ಅಲ್ಲದೇ, ಬಾಹ್ಯಕಾರಕಗಳೂ ಉಂಟು. ಅವನ್ನು ಪ್ರತಿಬಂಧಕಗಳೆಂದು ಹೇಳಬಹುದು. ಅವುಗಳಲ್ಲಿ ಮೂರು ವಿಧ : 

	1 ಭೌತ ಪ್ರತಿಬಂಧಕ. ಉದಾಹರಣೆಗೆ ಜಲಚರವರ್ಗಕ್ಕೆ ಸೇರಿದ ಪ್ರಾಣಿಗಳಿಗೆ ಭೂಮಿ ಪ್ರತಿಬಂಧಕವಾದರೆ ಭೂಚರವರ್ಗಕ್ಕೆ ಸೆರಿದವುಗಳಿಗೆ ನೀರು ಪ್ರತಿ ಬಂಧಕ.

	2 ವಾಯುಗುಣಾತ್ಮಕ ಪ್ರತಿಬಂಧಕ. ಉದಾಹರಣೆಗೆ ಉಷ್ಣತೆಯ ತೀವ್ರ ಏರಿಳಿತ, ತೇವ, ಮಳೆ, ಹಿಮ, ಆದ್ರ್ರತೆ, ಮಣ್ಣಿನ ತೇವ, ಬಿಸಿಲಿನ ಪ್ರಮಾಣ ಇತ್ಯಾದಿ.

	3 ಜೈವಿಕ ಪ್ರತಿಬಂಧಕ. ಉದಾಹರಣೆಗೆ ಅಗತ್ಯ ಪ್ರಮಾಣದ ಆಹಾರ ಕೊರತೆ, ಪ್ರತಿಸ್ಪರ್ಧಿ, ಶತ್ರು ಅಥವಾ ರೋಗಗಳ ಇರುವಿಕೆ. 

	ಪ್ರಾಣಿ ವಿತರಣ ವಿಧಾನಗಳು : ಪ್ರಾಣಿವಿತರಣವಿಜ್ಞನಕ್ಕೆ ಪರಿಸರವಿಜ್ಞಾನದೊಡ್ಡನೆ ಹೆಚ್ಚಿನ ಸಂಬಂಧ ಇರುವುದರಿಂದ ಪ್ರತಿಬಂಧಕಗಳನ್ನೂ ಪರಿಸರದ ಸ್ಥಿತಿಗತಿಗಳನ್ನೂ ಅವಲಂಬಿಸಿ ಪ್ರಾಣಿವಿತರಣೆಯ ಅಧ್ಯಯನವನ್ನು ನಡೆಸಲಾಗಿದೆ. ಇದರಲ್ಲಿ ಮೂರು ವಿಧ : 1 ಭೌಗೋಳಿಕ ವಿತರಣೆ, 2 ಪರಿಸರೀಯ ವಿತರಣೆ, 3 ಭೂವೈಜ್ಞಾನಿಕ ವಿತರಣೆ:

	1 ಭೌಗೋಳಿಕ ವಿತರಣೆ : ಅತಿ ಹೆಚ್ಚಿನ ಸಂಖ್ಯೆಯ ಪ್ರಾಣಿವರ್ಗಗಳು ಈ ವಿತರಣೆಯಲ್ಲಿ ಸೇರುತ್ತವೆ. ಎಂದೇ ಇದು ದೊಡ್ಡದಾದ ಹಾಗೂ ಮುಖ್ಯವಾದ ವಿತರಣೆಯೆನಿಸಿದೆ. ಇದರ ಬಗೆಗೆ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಿದವರಲ್ಲಿ ಸ್ಲೇಟರ್ (1857), ಗುಂಥರ್ (1858), ಆಂಡ್ರೂಮರ್ಫಿ (1866), ಹಕ್ಲ್ಸೇ(1868), ಆಲ್ಫ್ರೆಡ್ ರಸೆಲ್ ವ್ಯಾಲೇಸ್(1876), ಹೈಲ್‍ಪ್ರಿನ್ (1887), ಬ್ಲಾನ್‍ಫರ್ಡ್ (1890), ಲೈಡೆಕ್ಕರ್ (1896), ಗಾಡೋ (1913) ಮತ್ತು ಸ್ಮಿತ್ (1954) ಮುಖ್ಯರಾಗಿದ್ದಾರೆ. ಇವರ ಪೈಕಿ ವ್ಯಾಲೇಸ್ ಎಂಬಾತನನ್ನು ಪ್ರಾಣಿವಿತರಣವಿಜ್ಞಾನದ ಸ್ಥಾಪಕನೆಂದು ಪರಿಗಣಿಸಲಾಗಿದೆ. ಇವನ ವರ್ಗೀಕರಣ ವಿಧಾನ ಹೆಚ್ಚು ಸಮಂಜಸವಾದುದು. ಅನೇಕ ಪ್ರದೇಶಗಳನ್ನು ಒಟ್ಟಾರೆ ಸೇರಿಸಿ ವರ್ಗೀಕರಿಸುವ ಬದಲು ಪ್ರತ್ಯೇಕ ಪ್ರದೇಶಗಳಿಗೇ ಹೆಚ್ಚಿನ ಪ್ರಾಮುಖ್ಯ ನೀಡಿರುವುದು ಈ ವಿಧಾನದ ವೈಶಿಷ್ಟ್ಯ. ಈತ ಸ್ಲೇಟರನ ವಿಧಾನ ಅನುಸರಿಸಿದ್ದಾನೆ. ಸ್ಲೇಟರ್ ವರ್ಗೀಕರಿಸಿದ್ದ ಇಂಡಿಯಾ ಪ್ರದೇಶವನ್ನು (ಮಧ್ಯ ಪೇಲಿಯೊಟ್ರಾಪಿಕಲ್ ಪ್ರದೇಶ) ವ್ಯಾಲೇಸ್ ಓರಿಯಂಟಲ್ ಪ್ರದೇಶವೆಂದು ಕರೆದು ಉಳಿದೆಲ್ಲ ವರ್ಗೀಕರಣವನ್ನು ಹಾಗೆಯೇ ಇರಿಸಿದ್ದಾನೆ. 

ಪ್ರಾಣಿ ವಿತರಣೆಯ ಆರು ಖಂಡೀಯ ಪ್ರದೇಶಗಳು. ಅಡ್ಡಗೆರೆ ಎಳೆದಿರುವ ಪ್ರದೇಶಗಳು ಸನ್ನಿಕಟ ಎಲ್ಲೆಗಳನ್ನು ಮತ್ತು ಸಂಕ್ರಮ ಪ್ರದೇಶಗಳನ್ನು ಸೂಚಿಸುತ್ತವೆ.

ಚಿತ್ರ

	ವ್ಯಾಲೇಸ್ ಸೂಚಿಸಿರುವ ಪ್ರಾಣಿ ವಿತರಣ ಪ್ರದೇಶಗಳಿವು : ಪೇಲಿಯಾರ್ಕ್‍ಟಿಕ್ ಪ್ರದೇಶ, ಈಥಿಯೋಪಿಯನ್ ಪ್ರದೇಶ, ಓರಿಯಂಟಲ್ ಪ್ರದೇಶ, ಆಸ್ಟ್ರೇಲಿಯನ್ ಪ್ರದೇಶ, ನೀಯಾರ್ಕ್‍ಟಿಕ್ ಪ್ರದೇಶ, ನೀಯೊಟ್ರಾಪಿಕಲ್ ಪ್ರದೇಶ. 

	ಪೇಲಿಯಾರ್ಕ್‍ಟಿಕ್ ಪ್ರದೇಶ : ಈ ಪ್ರದೇಶದ ವಿಸ್ತೀರ್ಣ ಉಳಿದೆಲ್ಲ ಪ್ರದೇಶಗಳಿಗಿಂತ ಜಾಸ್ತಿ. ಇದು ಯೂರೋಪ್ ಮತ್ತು ರಷ್ಯಾ ಭಾಗಗಳನ್ನು ಒಳಗೊಂಡು ಪೆಸಿಫಿಕ್ ತೀರದವರೆಗೂ ದಕ್ಷಿಣದಲ್ಲಿ ಭೂಮಧ್ಯ ಸಮುದ್ರಕ್ಕೆ ಸೇರಿದಂತಿರುವ ಆಫ್ರಿಕ ಮತ್ತು ಉತ್ತರ ಅರೇಬಿಯ ತೀರಪ್ರದೇಶ ಭಾಗಗಳಲ್ಲಿ ಸಮುದ್ರವೂ ಹಬ್ಬಿದೆ. ಈ ಪ್ರದೇಶ ಪೂರ್ವ, ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸಮುದ್ರವೂ ದಕ್ಷಿಣಕ್ಕೆ ಸಹರಾ ಮರುಭೂಮಿ ಮತ್ತು ಹಿಮಾಲಯ ಪರ್ವತವೂ ಇವೆ. ಪೇಲಿಯಾರ್ಕ್‍ಟಿಕ್ ಪ್ರದೇಶವನ್ನು ನಾಲ್ಕು ಉಪಪ್ರದೇಶಗಳಾಗಿ ವಿಂಗಡಿಸಲಾಗಿದೆ. 

	(i) ಯೂರೊಪ್ ಉ. ಪ್ರ. : ದಕ್ಷಿಣ ಯೂರೊಪಿನಿಂದ ದಕ್ಷಿಣದಲ್ಲಿ ಕಪ್ಪು ಸಮುದ್ರದವರೆಗೆ. ಪೂರ್ವದಲ್ಲಿ ಕ್ಯಾಸ್ಪಿಯನ್ ಸಮುದ್ರ ಮತ್ತು ಯೂರೊಪ್ ಪರ್ವತಗಳ ಗಡಿಗಳು.

	(ii) ಭೂಮಧ್ಯ ಸಮುದ್ರ ಉ. ಪ್ರ. : ದಕ್ಷಿಣ ಯೂರೊಪ್ ಸಹರಾ ಮತ್ತು ಈಜಿಪ್ಟ್ ಸೇರಿದ ಉತ್ತರ ಆಫ್ರಿಕ, ಪೂರ್ವಕ್ಕೆ ಏಷ್ಯ ಮೈನರ್, ಪರ್ಷಿಯ ಮತ್ತು ಕಾಬೂಲ್ ಹಾಗೂ ಸಿಂಧೂ ಪ್ರದೇಶದ ಮರುಭೂಮಿ.

	(iii) ಸೈಬೀರಿಯ ಉ. ಪ್ರ. : ಉತ್ತರ ಮತ್ತು ಮಧ್ಯ ಏಷ್ಯದಿಂದ ಪೂರ್ವದಲ್ಲಿ ಮಂಗೋಲಿಯದ ವಿಶಾಲ ಮರುಭೂಮಿ ಹಾಗೂ ದಕ್ಷಿಣದಲ್ಲಿ ಹಿಮಾಲಯದಗಡಿ.

	(iv) ಮಂಚೂರಿಯ ಉ. ಪ್ರ. ಜಪಾನ್, ಉತ್ತರ ಚೀನ, ಕೊರಿಯ ಮತ್ತು ಮಂಚೂರಿಯ ಈ ಉಪಪ್ರದೇಶಗಳ ಕೆಲವು ಭಾಗಗಳಲ್ಲಿ ಉತ್ತರ ಸಮಶೀತೋಷ್ಣ ವಲಯವಿದೆ. ಪೂರ್ವ ಏಷ್ಯದ ಭಾಗಗಳಲ್ಲಿ (ಚೀನ, ಜಪಾನ್ ದೇಶಗಳನ್ನು ಒಳಗೊಂಡಂತೆ), ವರ್ಷಂಪ್ರತಿ ಎಲೆಗಳು ಉದುರಿಹೋಗುವ ಮರಗಳನ್ನು ಹೊಂದಿರುವ ಪರ್ಣಪಾತಿ ಅರಣ್ಯಗಳಿವೆ (ಡೆಸಿಡ್ಯುವಸ್ ಫಾರೆಸ್ಟ್ಸ್).

	ಏಷ್ಯದ ಒಳಪ್ರದೇಶ ಬಂಜರು ಭೂಮಿಯಿಂದ ಕೂಡಿದ್ದು, ನೈರುತ್ಯ ಏಷ್ಯದಿಂದ ಉತ್ತರ ಆಫ್ರಿಕದವರೆಗೆ ವ್ಯಾಪಿಸಿದೆ. ಯೂರೊಪಿನಲ್ಲಿ ಪರ್ಣಪಾತಿ ಅರಣ್ಯ ಅಥವಾ ಮಿಶ್ರ ಅರಣ್ಯ ಉಂಟು. ಉತ್ತರ ಏಷ್ಯ ಮತ್ತು ಯೂರೊಪಿನ ಮಧ್ಯಭಾಗದಲ್ಲಿ ಹೇರಳವಾಗಿ ಶಂಕುಧಾರಿ (ಕೋನಿಫೆರಸ್) ಅರಣ್ಯಗಳಿವೆ.

	ಈ ಪ್ರದೇಶದಲ್ಲಿ ಪ್ರಮುಖವಾಗಿ ಕಾಣಸಿಗುವ ಸ್ತನಿಗಳೆಂದರೆ ಹೆಜ್‍ಹಾಗ್, ಧ್ರುವಕರಡಿ, ಪ್ಯಾಂಡ, ಕುದುರೆ, ಹಂದಿ, ಒಂಟೆ, ಜಿಂಕೆ, ಮೊಲ, ಅಳಿಲು, ಹಾರುವ ಅಳಿಲು, ಬೀವರ್, ನೆಗೆಯುವ ಇಲಿ, ಬಾವಲಿ ಮತ್ತು ಕೋತಿ, ಇವೇ ಅಲ್ಲದೆ ಬೇರೆ ಬೇರೆ ಪ್ರಭೇದಗಳಿಗೆ ಸೇರಿರುವ ಪಕ್ಷಿಗಳು, ಸರೀ ಸೃಪಗಳು, ದ್ವಿಚರಿಗಳು ಹಾಗೂ ಮೀನುಗಳಿವೆ.

	ಈಥಿಯೋಪಿಯನ್ ಪ್ರದೇಶ; ಪ್ರಾಣಿ ವಿತರಣೆಯ ಪ್ರದೇಶಗಳಲ್ಲೆಲ್ಲ ವಿಶಿಷ್ಟವಾದ ಪ್ರದೇಶವಿದು. ಇದರಲ್ಲಿ ಅಟ್ಲಾಸ್ ಪರ್ವತ, ಸಹರಾ ಮರುಭೂಮಿಯ ದಕ್ಷಿಣಕ್ಕಿರುವ ಆಫ್ರಿಕ ಪ್ರದೇಶ ಹಾಗೂ ಅರೇಬಿಯ ದಕ್ಷಿಣ ಭಾಗದ ಮೂಲೆ ಪ್ರದೇಶ ಸೇರಿವೆ. ಮಡಗಾಸ್ಕರ್ ಪ್ರದೇಶವನ್ನು ಇದರಲ್ಲಿ ಸೇರಿಸಬಹುದಾದರೂ ಅದನ್ನು ಪ್ರತ್ಯೇಕವಾಗಿ ಪರಿಗಣಿಸುವುದು ಹೆಚ್ಚು ಸಮರ್ಪಕವೆಂದು ಡಾರ್ಲಿಂಗ್‍ಟನ್ ಹೇಳಿದ್ದಾರೆ. ಈಥಿಯೋಪಿಯನ್ ಪ್ರದೇಶದಲ್ಲಿ ನಾಲ್ಕು ಉಪಪ್ರದೇಶಗಳಿವೆ.

	(i) ಪೂರ್ವ ಆಫ್ರಿಕ ಉ. ಪ್ರ. : ಸಹರಾಕ್ಕೆ ದಕ್ಷಿಣದಲ್ಲಿರುವ ಉಷ್ಣವಲಯದ ಎಲ್ಲ ಭಾಗ, ಈಥಿಯೋಪಿಯ, ಯುಗಾಂಡ, ಕೀನ್ಯ. ಟಾಂಗಾನೀಕ (ಜಾಂಬೆಸಿ ನದಿಯ ತಡಿವರೆಗೆ).

	(ii) ಪಶ್ಚಿಮ ಆಫ್ರಿಕ ಉ. ಪ್ರ. : ಸೆನೆಗಾಲ್‍ನಿಂದ ಅಂಗೋಲದವರೆಗೆ ಗೋಲ್ಡ್‍ಕೋಸ್ಟ್ ಮತ್ತು ಕಾಂಗೋವರಗಿನ ಪ್ರದೇಶ.

	(iii) ದಕ್ಷಿಣ ಆಫ್ರಿಕ ಉ. ಪ್ರ. : ದಕ್ಷಿಣ ಆಫ್ರಿಕ ಯೂನಿಯನ್, ಮೊಜಾಂಬಿಕ್.

	(iv) ಮಲಗ್ಯಾಸಿ ಉ.ಪ್ರ. : ಮಡಗಾಸ್ಕರ್ ಮತ್ತು ಅದರ ಸುತ್ತಮುತ್ತಲ ದ್ವೀಪಗಳು.

	ಈಥಿಯೋಪಿಯನ್ ಪ್ರದೇಶ ಮುಖ್ಯವಾಗಿ ಉಷ್ಣವಲಯದಿಂದ ಕೂಡಿದೆ. ಆಫ್ರಿಕದ ದಕ್ಷಿಣ ತುದಿಪ್ರದೇಶದ ಸಮಶೀತೋಷ್ಣವಲಯದಿಂದ ಕೂಡಿರುವುದರಿಂದ ಅಲ್ಲಿ ಸಂಕೀರ್ಣವಾದ ಮಿಶ್ರ ಸಸ್ಯ ಸಂಪತ್ತಿದೆ. ದೊಡ್ಡ ನದಿಗಳೂ ನಿತ್ಯ ಹರಿ ದ್ವರ್ಣ ಕಾನನಗಳೂ ಇವೆ. ಈ ಪ್ರದೇಶದಲ್ಲಿ ಪ್ರಮುಖವಾಗಿರುವ ಪ್ರಾಣಿಗಳು ಎಂದರೆ ಗೊರಿಲ, ಚಿಂಪಾಂಜಿ, ಆನೆ, ಘೆಂೀಡಾ, ಸಿಂಹ, ನೀರುಕುದುರೆ, ಹೇಸರಗತ್ತೆ. ಜಿರಾಫೆ, ಕೊಂಬಿನ ಜಿಂಕೆ, ಉಷ್ಟ್ರಪಕ್ಷಿ ಮತ್ತು ಗಿನೀಕೋಳಿ. ಮಡಗಾಸ್ಕರ್ ಪ್ರದೇಶದಲ್ಲಿ ಹಲವಾರು ಲೀಮರ್‍ಗಳನ್ನು ಕಾಣಬಹುದು. ಈಥಿಯೋಪಿಯನ್ ಪ್ರದೇಶದಲ್ಲಿ ಬೇರೆ ಬೇರೆ ಪ್ರಭೇದಗಳಿಗೆ ಸೇರಿದ ಅಸಂಖ್ಯಾತ ಹಕ್ಕಿಗಳಿವೆ. ಕೋಗಿಲೆ, ಮರಕುಟುಕ, ಗೀಜಗ, ಹನಿಗೈಡ್, ಬುಲ್‍ಬುಲ್, ಸೂರ್ಯಪಕ್ಷಿ, ಪ್ರಾಣಿಭಕ್ಷಿಗಳಾದ ಗಿಡುಗ, ರಣಹದ್ದು ಮತ್ತು ಗೂಬೆ ಇವೆ. ಈ ಪ್ರದೇಶಕ್ಕೆ ಸೀಮಿತವಾದ ಪಕ್ಷಿಗಳೆಂದರೆ ಉಷ್ಟ್ರಪಕ್ಷಿ, ಹ್ಯಾಮರ್‍ಹೆಡ್, ಟಾರಕೋಸ್, ಮೌಸ್ ಮತ್ತು ಹಲ್ಮೆಟ್ ಶ್ರೈಕ್ ಪಕ್ಷಿ. ಇವುಗಳ ಜೊತೆಗೆ ವಿವಿಧ ಬಗೆಯ ಹಾವು, ಕಪ್ಪೆ, ಮೀನು ಕೂಡ ಇವೆ.

	ಓರಿಯಂಟಲ್ ಪ್ರದೇಶ : ಈ ಪ್ರದೇಶದಲ್ಲಿ ಭಾರತ, ಶ್ರೀಲಂಕಾ, ಇಂಡೊ ಚೀನ, ಮಲಯ, ಅರ್ಚಿಪೆಲಾಗೋ, ಸುಮಾತ್ರ, ಬೋರ್ನಿಯೊ, ಜಾವ, ಬಾಲಿ, ಸೆಲೆಬೆಸ್ ಮತ್ತು ಫಿಲಿಫೈನ್ ದ್ವೀಪಗಳು ಸೇರಿವೆ. ಇದರ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತ ಉಳಿದ ಕಡೆ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳಿವೆ. ಈ ಪ್ರದೇಶದ ಉಪಪ್ರದೇಶಗಳು ನಾಲ್ಕು.

ಭಾರತ ಉ. ಪ್ರ. : ಹಿಮಾಲಯ ಪರ್ವತದ ತಪ್ಪಲಿನಿಂದ ಮೊದಲು ಗೊಂಡಿದೆ. ಇದು ಆಫ್ರಿಕ ಪ್ರದೇಶವನ್ನು ಹೆಚ್ಚಾಗಿ ಹೋಲುತ್ತದೆ.

	(ii) ಶ್ರೀಲಂಕಾ ಉ. ಪ್ರ. : ದಕ್ಷಿಣ ಭಾರತ ಕೆಲವು ಭಾಗ ಮತ್ತು ಶ್ರೀಲಂಕಾ

	(iii) ಇಂಡೊಚೀನ ಉ. ಪ್ರ. : ದಕ್ಷಿಣ ಚೀನ ಮತ್ತು ಬರ್ಮ.

	(iv) ಇಂಡೊಮಲಯ ಉ. ಪ್ರ. : ಮಲಕ ಪ್ರಸ್ಥಭೂಮಿ, ಮಲಯ ದ್ವೀಪಗಳು, ಬಾಲಿ, ಬೋರ್ನಿಯೋ, ಫಿಲಿಪೀನ್ಸ್ ದ್ವೀಪಗಳು.

	ಈ ಪ್ರದೇಶ ಮುಖ್ಯವಾಗಿ ಉಷ್ಣವಲಯದಿಂದ ಕೂಡಿದೆ. ಇಲ್ಲಿ ವಾಸಿಸುವ ಮುಖ್ಯ ಪ್ರಾಣಿಗಳು ಟಾರ್ಸಿಯರ್, ಮಕಾಕ್, ಗಿಬನ್, ಉರಾಂಗ್ ಉಟಾನ್, ಭಾರತದ ಆನೆ, ಘೇಂಡಾ, ಕಾಡುನಾಯಿ, ಕರಡಿ ಮತ್ತು ಕಾಡುಹಂದಿ. ಅಲ್ಲದೆ ಅನೇಕ ವರ್ಣರಂಜಿತ ಪಕ್ಷಿಗಳೂ ಇವೆ. ಮರಕುಟುಕ, ಬುಲ್‍ಬುಲ್, ಪಿಟ, ಬ್ಯಾಬ್ಲರ್ ಹೇರಳವಾಗಿವೆ. ಹಲ್ಲಿ, ಹಾವು, ಆಮೆ, ಕಪ್ಪೆ, ಮೀನು ಇಲ್ಲಿ ವಾಸಿಸುತ್ತವೆ. ಓರಿಯಂಟಲ್ ಮತ್ತು ಈಥಿಯೋಪಿಯನ್ ಪ್ರದೇಶಗಳು ಉಷ್ಣವಲಯದವಾದ್ದರಿಂದ ಕೆಲವು ಪ್ರಾದೇಶಗಳನ್ನು ಎರಡೂ ಪ್ರದೇಶಗಳಲ್ಲಿ ಕಾಣಬಹುದು.

	ಆಸ್ಟ್ರೇಲಿಯನ್ ಪ್ರದೇಶ : ಆಸ್ಟ್ರೇಲಿಯ, ಟಾಸ್‍ಮೇನಿಯ, ನ್ಯೂಗಿನಿ, ನ್ಯೂ ಜೀಲೆಂಡ್, ಪೆಸಿಫಿಕ್‍ನ ಓಷೀಯಾನಿಕ್ ಸಣ್ನ ದ್ವೀಪಗಳು ಈ ಪ್ರದೇಶಕ್ಕೆ ಸೇರಿವೆ. ಓರಿಯಂಟಲ್ ಪ್ರದೇಶದ ಕೆಲವು ಪ್ರಾಣಿವರ್ಗಗಳು ಈ ಪ್ರದೇಶದಲ್ಲಿ ಕೂಡ ಕಂಡುಬರುತ್ತವಾದ್ದರಿಂದ ಇದರ ಗಡಿಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆದರೆ ವ್ಯಾಲೇಸ್ ಈ ಸಮಸ್ಯೆಯನ್ನು ಪರಿಹರಿಸಿದ್ದಾನೆ. ಅವರು ಬೋರ್ನಿಯೊ, ಜಾವ, ಬಾಲಿ ಮುಂತಾದ ದ್ವೀಪಗಳನ್ನು ಓರಿಯಂಟಲ್ ಪ್ರದೇಶಕ್ಕೆ ಸೇರಿಸಿ ಸೆಲಿಬೆಸ್, ತಿಮೊರ್ ಮತ್ತು ಲೋಬಾಕ್‍ಗಳನ್ನು ಆಸ್ಟ್ರೇಲಿಯ ಪ್ರದೇಶಕ್ಕೆ ಸೇರಿಸಿದ್ದಾನೆ. ಓರಿಯಂಟಲ್ ಮತ್ತು ಆಸ್ಟ್ರೇಲಿಯ ಪ್ರದೇಶಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಭೂಪಟದ ಮೇಲೆ ಎಳೆದ ಉದ್ದಗೆರೆಗೆ ವ್ಯಾಲೇಸ್‍ಗೆರೆ ಎಂದೂ, ಸಮಸ್ಯೆಗೆ ಸಿಕ್ಕಿದ ಕೆಲವು ದ್ವೀಪಗಳಿಗೆ ವ್ಯಾಲೇಸಿಯ ಎಂದೂ ಹೆಸರು. ಈ ಪ್ರದೇಶ ಭಾಗಶಃ ಉಷ್ಣ ವಲಯಕ್ಕೂ ಭಾಗಶಃ ದಕ್ಷಿಣ ಸಮಶೀತೋಷ್ಣವಲಯಕ್ಕೂ ಸೇರಿದೆ. ನ್ಯೂ ಗಿನಿ ಪೂರ್ಣವಾಗಿ ಉಷ್ಣವಲಯದಲ್ಲಿದೆ. ಮಳೆಗಾಡುಗಳಿಂದ ತುಂಬಿದೆ. ಅಲ್ಲದೆ ಹುಲ್ಲುಗಾವಲು ಪ್ರದೇಶಗಳು, ಪರ್ವತಗಳನ್ನು ಆವರಿಸಿದ ಸಸ್ಯವರ್ಗಗಳು ಮತ್ತು ದಕ್ಷಿಣತೀರ ಪ್ರದೇಶದಲ್ಲಿ ನೀಲಗಿರಿ ಮರದ ಕಾಡುಗಳು ಇವೆ. ಈ ಪ್ರದೇಶದ ಉಪಪ್ರದೇಶಗಳು ನಾಲ್ಕು.

	(i) ಆಸ್ಟ್ರೇಲಿಯ-ಮಲಯ ಉ. ಪ್ರ. : ಪಶ್ಚಿಮದಲ್ಲಿ ಸೆಲೆಬೆಸ್ ಮತ್ತು ಲೊಂಬಾಕ್ ದ್ವೀಪಗಳು ಪೂರ್ವದಲ್ಲಿ ನ್ಯೂಗಿನಿ ಮತ್ತು ಸಾಲೊಮನ್ ದ್ವೀಪಗಳು.

	(ii) ಆಸ್ಟ್ರೇಲಿಯ ಉ. ಪ್ರ. : ಆಸ್ಟ್ರೇಲಿಯ ಮತ್ತು ಟಾಸ್ಮೇನಿಯ.

	(iii) ಪಾಲಿನೇಷಿಯ ಉ. ಪ್ರ. : ಪೆಸಿಫಿಕ್ ಸಾಗರದ ದ್ವೀಪಗಳು.

	(iv) ನ್ಯೂ ಜೀಲೆಂಡ್ ಉ. ಪ್ರ. : ನ್ಯೂ ಜೀಲೆಂಡ್, ಆಕ್ಲೆಂಡ್ ಮತ್ತು ಫಾದಮ್ ದ್ವೀಪಗಳು.

	ಈ ಪ್ರದೇಶದಲ್ಲಿ ಮಾನೊಟ್ರೀಮ್, ಮಾಸ್ರ್ಯೂಪಿಯಲ್ ದಂಶಕವರ್ಗದ ಪ್ರಾಣಿಗಳು (ಇಲಿಗಳನ್ನು ಬಿಟ್ಟು ಬೇರೆ ಜರಾಯು ಸ್ತನಿಗಳಿಲ್ಲ), ಕಾಂಗರೂ, ಈಮ್ಯೂ, ಬ್ರಷ್ ಟರ್ಕಿ, ಲೈರ್‍ಹಕ್ಕಿಗಳು, ಪ್ಯಾರಡೈಸ್ ಹಕ್ಕಿಗಳು, ಆಸ್ಟ್ರೇಲಿಯದ ಫುಪ್ಛುಸ ಮೀನು (ಲಂಗ್‍ಫಿಶ್) ಮುಂತಾದವು ಇವೆ. ನ್ಯೂ ಜೀಲೆಂಡಿನಲ್ಲಿ ಸ್ಪೀನೊಡಾನ್ ಮತ್ತು ಕೀವಿ ಎಂಬವು ವಾಸಿಸುತ್ತವೆ.

	ನೀಯಾರ್ಕ್‍ಟಿಕ್ ಪ್ರದೇಶ : ಇದು ಉತ್ತರ ಅಮೆರಿಕ ಹಾಗೂ ದಕ್ಷಿಣದಲ್ಲಿ ಮಧ್ಯ ಮೆಕ್ಸಿಕೋವರಗೆ ವ್ಯಾಪಿಸಿದೆ. ಪೂರ್ವಕ್ಕೆ ಗ್ರೀನ್‍ಲೆಂಡ್, ಪಶ್ಚಿಮದಲ್ಲಿ ಅಲ್ಯೂಷಿಯನ್ ದ್ವೀಪಗಳು ಇವೆ. ಮಧ್ಯ ಅಮೆರಿಕದ ಇಕ್ಕಟ್ಟು ಪ್ರದೇಶವನ್ನುಳಿದು ಮಿಕ್ಕೆಲ್ಲ ಭಾಗಗಳನ್ನು ಸಮುದ್ರ ಆವರಿಸಿದೆ. ಉತ್ತರ ಸಮಶೀತೋಷ್ಣ ವಲಯ ಈ ಪ್ರದೇಶದಲ್ಲಿದೆ. ಉತ್ತರ ಅಮೆರಿಕದ ಪೂರ್ವಭಾಗದಲ್ಲಿ ಪರ್ಣಪಾತಿ ಅಥವಾ ಮಿಶ್ರಕಾಡು ಪ್ರದೇಶವಿದೆ. ಪಶ್ಚಿಮ ಭಾಗದಲ್ಲಿ ಅಂದರೆ ಖಂಡದ ಮಧ್ಯ ಭಾಗದಲ್ಲಿ ವಿಶಾಲವಾದ ಹುಲ್ಲುಗಾವಲುಗಳಿವೆ. ಪಶ್ಚಿಮ ಭಾಗದಿಂದ ಆಚೆಗೆ ಬಂಜರು ಭೂಮಿ ವ್ಯಾಪಿಸಿದೆ. ಈ ಭಾಗದಲ್ಲಿರುವ ಪರ್ವತಗಳಲ್ಲಿ ಮಿಶ್ರ ಅಥವಾ ಶಂಕುಧಾರಿ ಕಾನನಗಳಿವೆ. ಈ ಪ್ರದೇಶದ ಉಪಪ್ರದೇಶಗಳು ನಾಲ್ಕು :

	(i) ಕ್ಯಾಲಿಫೋರ್ನಿಯ ಉ. ಪ್ರ : ಕ್ಯಾಲಿಫೋರ್ನಿಯ ಮತ್ತು ಒರೆಗಾನ್.

	(ii) ರಾಕಿ ಪರ್ವತ ಉ. ಪ್ರ. : ರಾಕಿ ಪರ್ವತ ಶ್ರೇಣಿ, ನ್ಯೂ ಮೆಕ್ಸಿಕೊ, ಟೆಕ್ಸಾಸ್.

	(iii) ಆಲ್ಛಫೇರಿಯ ಉ. ಪ್ರ. : ಮಿಸಿಸಿಪ್ಪಿ ಕಣಿವೆ, ಅಲೆಘಾನಿ ಪರ್ವತ ಪ್ರದೇಶ, ಅಮೆರಿಕ ಸಂಯುಕ್ತ ಸಂಸ್ಥಾನಗಳ 
ಪೂರ್ವಭಾಗ.

	(iv) ಕೆನಡ ಉ. ಪ್ರ. : ಮಹಾಸರೋವರಗಳಿಂದ ಉತ್ತರ ಧ್ರುವ ಸಾಗರದ ವರೆಗೆ ಉತ್ತರ ಅಮೆರಿಕದ ಎಲ್ಲ ಉತ್ತರ ಭಾಗಗಳು.

ಈ ಪ್ರದೇಶದಲ್ಲಿ ಪರ್ವತದ ಆಡು, ಕವಲು ಕೊಂಬಿನ ಜಿಂಕೆ ಕ್ಯಾರಿಬೂ, ಮಸ್ಕ್‍ರ್ಯಾಟ್, ಸ್ಕಂಕ್, ಬ್ಯಾಡ್ಜರ್, ಕರಡಿ, ಬಾವಲಿ, ಮುಂತಾದ ಪ್ರಾಣಿಗಳಿವೆಯಲ್ಲದೆ ವುಡ್‍ವಾರ್ಬಲರ್, ಕಾರ್ಡಿನಲ್, ಹಮ್ಮಿಂಗ್ ಪಕ್ಷಿಗಳು, ಗೋಲ್ಡನ್ ಬಾಲ್ಡ್ ಹದ್ದು, ಫಾಲ್ಕನ್, ನೈಟ್‍ಜಾರ್, ಸ್ವಾಲೋಸ್, ರೋಡ್‍ರನ್ನರ್, ಪಿಟ್ ಮಾರಿಗನ್, ಗ್ರೌಸಸ್, ಗೂಬೆ ಮುಂತಾದವು ಕೂಡ ಇವೆ. ನೀಯಾಕ್ರ್ಟಿಕ್ ಪ್ರದೇಶ ಸರೀಸೃಪಗಳ ತವರು. ಇಲ್ಲಿ ಗಾರ್ಟರ್ ಹಾವು ಮತ್ತು ವಿಷಪೂರಿತ ಬುಡಬುಡಿಕೆ ಹಾವು ಉಂಟು. ಗೀಲ ಮಾನ್ಸ್‍ಟರ್ ಎಂಬ ಹಲ್ಲಿ ಈ ಪ್ರದೇಶಕ್ಕೇ ಸೀಮಿತವಾದುದು. ಬಾಲವಿರುವ ದ್ವಿಚರಿಗಳು ಹೇರಳವಾಗಿವೆ. ಗಾರ್‍ಪೈಕ್, ಲಿಪಿಸ್ಟಿಯಸ್, ಎಮಿಯ, ಅಸಿಪೆನ್ಸರ್, ಮುನಿಯೆ ಮತ್ತು ಬಾಸ್ ಪ್ರಭೇದದ ಮೀನುಗಳು ಮತ್ತು ಪರ್ಚ್ ಮೀನುಗಳು ವಾಸವಾಗಿವೆ.

	ನೀಯೊಟ್ರಾಪಿಕಲ್ ಪ್ರದೇಶ : ದಕ್ಷಿಣ ಮತ್ತು ಮಧ್ಯ ಅಮೆರಿಕ, ಮೆಕ್ಸಿಕೋದ ಉಷ್ಣವಲಯ ಕೆಳಪ್ರದೇಶಗಳು, ಟ್ರಿನಿಡಾಡ್ ಮತ್ತು ವೆಸ್ಟ್ ಇಂಡೀಸ್ ಇವು ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ನೀಯೊಟ್ರಾಪಿಕಲ್ ಪ್ರದೇಶ ಉಷ್ಣವಲಯದಲ್ಲಿದೆ. ಆದರೆ ದಕ್ಷಿಣ ಅಮೆರಿಕದ ದಕ್ಷಿಣ ಭಾಗ ದಕ್ಷಿಣ ಸಮಶೀತೋಷ್ಣವಲಯದ ವರೆಗೂ ವಿಸ್ತರಿಸಿದೆ. ಪಶ್ಚಿಮದಿಂದ ಪೂರ್ವಕ್ಕೆ ಅಮೆಜಾನ್ ನದಿ ಹರಿಯುತ್ತದೆ. ನಿತ್ಯಹರಿದ್ವರ್ಣಕಾನನ, ಹುಲ್ಲುಗಾವಲು, ಮರುಭೂಮಿ ಮತ್ತು ಉಪಮರುಭೂಮಿ ಈ ಪ್ರದೇಶದಲ್ಲಿವೆ, ಪಶ್ಚಿಮದಲ್ಲಿ ಆಂಡಿ ಪರ್ವತಶ್ರೇಣಿಯುದ್ದಕ್ಕೂ ಕಾಡುಗಳಿವೆ. ಇಲ್ಲಿ ಅನೇಕ ಇಳಿಜಾರು ಪ್ರದೇಶಗಳಿವೆ. ಈ ಪ್ರದೇಶದ ಉಪಪ್ರದೇಶಗಳು ನಾಲ್ಕು.

	(i) ಬ್ರಜಿಲ್ ಉ. ಪ್ರ. : ವೆನಜ್ವೇಲ ತೀರದಿಂದ ಪೆರುಗ್ವೇವರೆಗೆ ಮತ್ತು ಪೂರ್ವ ಪೆರುವರೆಗೆ ಹರಡಿರುವ ಪ್ರದೇಶ.
(ii) ಚಿಲಿ ಉ. ಪ್ರ. : ಚಿಲಿಯ ದಕ್ಷಿಣ ಭಾಗಕ್ಕಿರುವ ಮೈದಾನಗಳು, ಮತ್ತು ಈ ಪ್ರದೇಶದ ಪರ್ವತ ಶ್ರೇಣಿಗಳು.
(iii) ಮೆಕ್ಸಿಕೋ ಉ. ಪ್ರ. : ಮಧ್ಯ ಅಮೆರಿಕ ಮತ್ತು ದಕ್ಷಿಣ ಮೆಕ್ಸಿಕೋ ಭಾಗಗಳು.
(iv) ಆ್ಯಂಟಿಲ್ಲಿಯನ್ ಉ.ಪ್ರ. ವೆಸ್ಟ್ ಇಂಡೀಸ್ ದ್ವೀಪಗಳು.

	ಈ ಪ್ರದೇಶದ ಮುಖ್ಯ ಪ್ರಾಣಿಗಳೆಂದರೆ ಲಾಮಾ, ಅಲ್ಪಾಕ. ಪಕರಿ, ಆರ್ಮಡಿಲ್ಲೊ. ಆ್ಯಂಟ್‍ಈಟರ್, ಗಿನಿಹಂದಿ, ರಕ್ತಹೀರುವ ಬಾವಲಿ, ರಿಯಾಸ್, ಟೂಕನ್ಸ್, ಕ್ಯೂರಸ್ಸೋಸ್ ಮುಂತಾದವು. ಇವುಗಳ ಜೊತೆಗೆ ಮಾರ್ಮಸೆಟ್ ಜೋಡುಕೋತಿ, ಆಟಿಲೀಸ್ ಅರಚುವ ಕೋತಿ, ಜಾಗ್ವಾರ್, ಕಾಡುಬೆಕ್ಕು, ಕರಡಿ, ಟೇಪರ್, ಜಿಂಕೆ, ಒಂಟೆ, ಕ್ಯಾಪಿಬ್ಯಾರ, ಕೇವಿಯ, ಪಕಾನ್ ಅಗೌಟಿಸ್, ಎಂಬವು ಕೂಡ ಇವೆ. ಈ ಪ್ರದೇಶದಲ್ಲಿ ಅಸಂಖ್ಯಾತ ಪಕ್ಷಿ ಪ್ರಭೇದಗಳುಂಟು. ವಿವಿಧ ರೀತಿಯ ವಿಚಿತ್ರ ಪಕ್ಷಿಗಳು ಹರಡಿಕೊಂಡಿರುವುದರಿಂದ ದಕ್ಷಿಣ ಅಮೆರಿಕ ದೇಶವನ್ನು ಪಕ್ಷಿಗಳ ಖಂಡವೆಂದು ಕರೆಯುತ್ತಾರೆ. ಅಮೆರಿಕದ ಉಪ್ಟ್ರಪಕ್ಷಿ (ರೀಯ) ಮತ್ತು ಟೆನಮೂ ಎಂಬವು ಈ ಪ್ರದೇಶಕ್ಕೆ ಸೀಮಿತವಾದವು. ಸುಮಾರು 7 ಮೀ ಉದ್ದದ ರಕ್ಕೆಗಳನ್ನು ಹೊಂದಿರುವ ಹಾರುವ ಹಕ್ಕಿಯಾದ ಕಾಂಡಾರ್‍ಹದ್ದು ಕೂಡ ಈ ಪ್ರದೇಶದಲ್ಲಿದೆ. ಕ್ವಿಲ್ ಪಕ್ಷಿಗಳನ್ನು ಬಿಟ್ಟರೆ ಇಲ್ಲಿ ಹಾಡುವ ಹಕ್ಕಿಗಳಿಲ್ಲ. ಕಾಗೆ ಜಾತಿಗೆ ಸೇರಿದ ಪಕ್ಷಿಗಳು ಈ ಪ್ರದೇಶದಲ್ಲಿ ಎಲ್ಲಿಯೂ ಕಾಣದಿರುವುದು ಒಂದು ವಿಶೇಷ. ಹಾವು, ಹಲ್ಲಿ, ಆಮೆ ಹೇರಳವಾಗಿವೆ. ಆನಕೊಂಡ, ಬೋವ, ಸಂಪೀಡಕ ಹಾವು, ಪಿಟ್‍ವೈಪರ್, ಹರಳು ಹಾವು, ಬುಡಬುಡಿಕೆ ಹಾವು ವಿಪುಲವಾಗಿವೆ. ಬಾಲದ ದ್ವಿಚರಿಗಳಲ್ಲಿ ಈಡಿಪೆಸ್ ಜಾತಿಯವು ಮಾತ್ರ ಇವೆ. ಛರಾಸಿನ್, ಜೆಮ್ನಾಟಿಡ್, ಮೀಸೆ ಮೀನು (ಕ್ಯಾಟ್‍ಫಿಶ್) ಇಲ್ಲಿ ವಾಸವಾಗಿವೆ. ಅಮೆಜಾನ್ ನದಿಯಲ್ಲಿ ವಾಸವಾಗಿರುವ ಜಿಮ್ನಾಟಿಡ್ ಮೀನುಗಳಲ್ಲಿ ಈಲ್ ಎಂಬವೂ ಫರಾಸಿನ್‍ಗಳಲ್ಲಿ ಭಯಂಕರ ಮಾಂಸಾಹಾರಿಗಳಾದ ಪಿರಾನ ಮೀನುಗಳು ವಿಶೇಷವಾದವು. ಫುಪ್ಛುಸಮೀನು ಲಿಪಿಡೋಸೈರಸ್ ಎಂಬುದು ಈ ಪ್ರದೇಶಕ್ಕೆ ಸೀಮಿತವಾಗಿದೆ.

	ಪರಿಸರೀಯ ವಿತರಣೆ : ಪ್ರಾಣಿಗಳು ವಾಸಿಸುವ ಪರಿಸರದ ಆಧಾರದ ಮೇಲೆ ಮಾಡಿರುವ ವಿತರಣೆ. ಈ ಬಗೆಯ ವಿತರಣೆ ಹೆಚ್ಚು ವೈಜ್ಞಾನಿಕವಾದುದಲ್ಲವೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಜಲಚರ ಮತ್ತು ಭೂಚರ ಪ್ರಾಣಿಗಳ ವಿತರಣೆ ಇಂತಿವೆ.
	ಉಪ್ಪುನೀರಿನಲ್ಲಿ ವಾಸಿಸುವ ಪ್ರಾಣಿಗಳ ವಿತರಣೆ : (i) ಪ್ಲಾಂಕ್‍ಟನ್ : ಪ್ರೋಟೊಜೋವ, ಕ್ರಸ್ಟೇಷಿಯಗಳು, ಕೆಲವು ಮೃದ್ವಂಗಿಗಳು ಇತ್ಯಾದಿ.
	(ii) ನೆಕ್‍ಟನ್ : ಸ್ಕ್ವಿಡ್, ಮೀನು, ಸಮುದ್ರಹಾವು, ಸಮುದ್ರಹಕ್ಕಿ, ಸೀಲ್, ತಿಮಿಂಗಿಲ ಇತ್ಯಾದಿ.
	(iii) ಬೆನ್‍ಥೋಸ್ : ಕೆಲವು ಹುಳುಗಳು, ಮೃದ್ವಂಗಿ, ಕ್ರಸ್ಟೇಷಿಯ (ವಲ್ಕವಂತ), ಸ್ಪಂಜುಪ್ರಾಣಿ, ಹೈಡ್ರ, ಕಡಲಹೂ (ಅನಿಮೋನ್), ಹವಳಪ್ರಾಣಿ ಮುಂತಾದವು.
	ಕಡಲಿನ ವಿವಿಧ ಆಳಗಳಲ್ಲಿ ಜೀವಿಸುತ್ತಿರುವ ಜಲಚರಗಳ ಪಟ್ಟಿ

ಆಳ ಮೀಟರುಗಳಲ್ಲಿ
ಪ್ರಭೇದಗಳ ಸಂಖ್ಯೆ

0- 60
4400

60- 300
2050

300- 600
710

600- 900
600

900-1200
500

1200-1500
340

1500ಕ್ಕಿಂತ ಕೆಳಗೆ
235

	ಸಿಹಿ ನೀರಿನಲ್ಲಿ ವಾಸಿಸುವ ಪ್ರಾಣಿಗಳ ವಿತರಣೆ : ಸ್ತನಿ ಪಕ್ಷಿ, ಉರಗ ಮತ್ತು ಕೀಟ, ದ್ವಿಚರಿಗಳು, ಮೃದ್ವಂಗಿಗಳು, ಕ್ರಸ್ಟೇಷಿಯನ್ಸ್, ಹುಳುಗಳು ಮತ್ತು ಪ್ರೋಟೊಜೋವ ವರ್ಗಕ್ಕೆ ಸೇರಿದ ಕೆಲವು ಪ್ರಾಣಿಗಳು.

	ಭೂವೈಜ್ಞಾನಿಕ ವಿತರಣೆ : ಪ್ರಾಚೀನ ಕಾಲದಲ್ಲಿ ಜೀವಿಸಿದ್ದ ಪ್ರಾಣಿಗಳ ಮತ್ತು ಸಸ್ಯಗಳ ಪಳೆಯುಳಿಕೆಗಳು ಭೂವೈಜ್ಞಾನಿಕ ವಿತರಣೆಗೆ ಸಹಕಾರಿ. ಪಳೆಯುಳಿಕೆಗಳು ದೊರೆಯುವ ಸ್ಥಳಗಳ ಆಧಾರದಿಂದ ಪ್ರಾಣಿ ಯಾವ ಪ್ರದೇಶ ಅಥವಾ ವಲಯದಲ್ಲಿ ಯಾವ ಕಾಲದಲ್ಲಿ ವಾಸವಾಗಿತ್ತು, ಯಾವ ಸಸ್ಯ ಆ ಪ್ರದೇಶದಲ್ಲಿ ಬೆಳೆಯುತ್ತಿತ್ತು ಎಂಬುದನ್ನು ಪತ್ತೆಹಚ್ಚಿ ವಿತರಣೆ ನಡೆಸಬಹುದು.

	ಪ್ರಪಂಚದ ಬೇರೆ ಬೇರೆ ಪ್ರದೇಶಗಳು ಅವುಗಳದೇ ಆದ ವಿಶಿಷ್ಟ ಪ್ರಾಣಿ ಸಂಪತ್ತನ್ನೂ ಸಸ್ಯಸಂಪತ್ತನ್ನೂ ಹೊಂದಿವೆ. ವಿವಿಧ ವಿದ್ವಾಂಸರು ತಮಗೆ ಸರಿಕಂಡ ರೀತಿಯಲ್ಲಿ ಪ್ರಾಣಿಗಳ ವಿತರಣೆಯನ್ನು ನಡೆಸಿ ತಮ್ಮ ಸಫಲತೆಯನ್ನು ಕಂಡುಕೊಂಡಿದ್ದಾರೆ. ಈ ವಿತರಣೆಗಳಿಗೆ ಇತಿಮಿತಿಗಳಿವೆ, ಅರೆಕೊರೆಗಳಿವೆ ಎಂದೇ ಇವುಗಳಲ್ಲಿ ಯಾವ ಬಗೆಯ ವಿತರಣೆಯೂ ಪೂರ್ಣವಾದುದಲ್ಲ, ಸಮಂಜಸವಾದುದಲ್ಲ. ಆದರೂ ಪ್ರಾಣಿ ವಿಜ್ಞಾನಿಗಳು ಪರಿಸರವಿಜ್ಞಾನಿಗಳು, ಭೂಗೋಳ ಮತ್ತು ಭೂವಿಜ್ಞಾನಿಗಳು ಪ್ರಾಣಿವಿತರಣವಿಜ್ಞಾನದತ್ತ ತಮ್ಮ ತೀವ್ರ ಗಮನ ಹರಿಸುತ್ತಿದ್ದಾರೆ.
(ಎನ್.ವಿ.ಎ.; ಎಚ್.ಎಚ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ